ಏರ್ ಮಾರ್ಷಲ್ ರವೀಂದರ್ ನಾಥ ಭಾರದ್ವಾಜ್ ಅವರು ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿ. ಇವರು ಪರಮ ವಿಶಿಷ್ಟ ಸೇವಾ ಪದಕ, ಮಹಾವೀರ ಚಕ್ರ (ಭಾರತದ ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿ) ಮತ್ತು ವಾಯು ಸೇನಾ ಪದಕ ಪಡೆದಿದ್ದಾರೆ. == ಆರಂಭಿಕ ವೃತ್ತಿ ಜೀವನ == ಏರ್ ಮಾರ್ಷಲ್ ರವೀಂದರ್ ನಾಥ್ ಭಾರದ್ವಾಜ್ ಅವರು ೧೯೩೫ರ ಜುಲೈನಲ್ಲಿ ಅವಿಭಜಿತ ಬ್ರಿಟಿಷ್ ಭಾರತದ ಲಾಹೋರ್ನಲ್ಲಿ ಜನಿಸಿದರು. ಅವರ ತಂದೆ ಶ್ರೀ ಪಿ. ಎನ್. ಭಾರದ್ವಾಜ್. == ಸೇನಾ ವೃತ್ತಿಜೀವನ == ಭಾರದ್ವಾಜ್ ಅವರನ್ನು ೧೯೫೫ ರ ಅಕ್ಟೋಬರ್ ೮ ರಂದು ಭಾರತೀಯ ವಾಯುಪಡೆಗೆ (ಐಎಎಫ್) ನಿಯೋಜಿಸಲಾಯಿತು. ಅವರು ೧೯೬೫ ಮತ್ತು ೧೯೭೧ರ ಭಾರತ-ಪಾಕಿಸ್ತಾನ ಯುದ್ಧಗಳೆರಡರಲ್ಲೂ ಕಾರ್ಯಪ್ರವೃತ್ತರಾಗಿದ್ದರು. ೧೯೭೧ರ ಜನವರಿಯಲ್ಲಿ, ಅವರು ಕಾರ್ಯಾಚರಣೆಯ ತರಬೇತಿ ಪಡೆಯೊಂದರಲ್ಲಿ ಸೇವೆ ಸಲ್ಲಿಸಿದರು. ಅಲ್ಲಿ ಅವರು ಸುಧಾರಿತ ಹಾರಾಟ ಕೌಶಲ್ಯ ಮತ್ತು ತರಬೇತಿ ಪಡೆಯುವವರಲ್ಲಿ ಅಗತ್ಯ ಜ್ಞಾನವನ್ನೊದಗಿಸಲು ಸೂಕ್ತ ಕ್ರಮಗಳನ್ನು ಜಾರಿಗೆ ತಂದರು. ಈ ಸೇವೆಗಾಗಿ ಅವರು ವಾಯು ಸೇನಾ ಪದಕಕ್ಕೆ ಭಾಜನರಾದರು. ೧೯೭೧ರ ಯುದ್ಧದ ಸಮಯದಲ್ಲಿ, ಅವರು ಹಾಕರ್ ಹಂಟರ್ ವಿಮಾನಗಳನ್ನು ಹೊಂದಿದ ಫೈಟರ್ ಬಾಂಬರ್ ಸ್ಕ್ವಾಡ್ರನ್ ಐಎಎಫ್ ನ ೨೦ನೇ ಸ್ಕ್ವಾಡ್ರನ್ನಲ್ಲಿ ಸ್ಕ್ವಾಡ್ರನ್ನ ನಾಯಕ ಹುದ್ದೆಯನ್ನು ಅಲಂಕರಿಸಿದ್ದರು. ಸ್ಕ್ವಾಡ್ರನ್ನ ಹಿರಿಯ ಅಧಿಕಾರಿಯಾಗಿ, ಅವರು ಪಾಕಿಸ್ತಾನದ ಭೂಪ್ರದೇಶದೊಳಗೆ ಅನೇಕ ತೀಕ್ಷ್ಣ ಕಾರ್ಯಾಚರಣೆಗಳನ್ನು ಕೈಗೊಂಡು ಸೇನಾಪಡೆಯನ್ನು ಮುನ್ನಡೆಸಿದರು. ವಾಯುನೆಲೆಗಳು, ತೈಲ ಸಂಸ್ಕರಣಾಗಾರಗಳು ಮತ್ತು ಭೂ ಕಾರ್ಯಾಚರಣೆಗಳಿಗೆ ಬೆಂಬಲ ಸೇರಿದಂತೆ ಹೆಚ್ಚು ರಕ್ಷಿಸಲ್ಪಟ್ಟ ಪ್ರದೇಶಗಳ ಮೇಲೆ ದಾಳಿ ಮಾಡಿದರು. ಯುದ್ಧ ಕಾರ್ಯಾಚರಣೆಗಳಲ್ಲಿ ಪ್ರದರ್ಶಿಸಿದ ಶೌರ್ಯ ಮತ್ತು ನಾಯಕತ್ವಕ್ಕಾಗಿ, ಸ್ಕ್ವಾಡ್ರನ್ ಲೀಡರ್ ರವೀಂದರ್ ನಾಥ ಭಾರದ್ವಾಜ ಅವರಿಗೆ ಭಾರತದ ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಮಹಾವೀರ ಚಕ್ರ ನೀಡಿ ಗೌರವಿಸಲಾಯಿತು. ಯುದ್ದದ ನಂತರ ಅವರು ಉನ್ನತ ಜವಾಬ್ದಾರಿಗಳನ್ನು ನಿರ್ವಹಿಸಿದರು. ಅವೆಂದರೆ: ನಿರ್ದೇಶಕರು, ಯೋಜನೆಗಳು, ವಾಯು ಕೇಂದ್ರ ಕಛೇರಿ. ೧೫ ನೇ ವಿಂಗ್ ನ ಏರ್ ಆಫೀಸರ್ ಕಮಾಂಡಿಂಗ್ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಉಪ ಕಮಾಂಡೆಂಟ್ ಮತ್ತು ಮುಖ್ಯ ಬೋಧಕರು, ಖಡಕ್ವಾಸ್ಲಾ ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್, ದಕ್ಷಿಣ ಏರ್ ಕಮಾಂಡ್, ತಿರುವನಂತಪುರಂ ೧೯೯೩ ರ ಜುಲೈ ೩೧ರಂದು ನಿವೃತ್ತರಾಗುವ ಮೊದಲು ಅವರು ಏರ್ ಮಾರ್ಷಲ್ ಹುದ್ದೆಗೆ ಏರಿದರು. == ಉಲ್ಲೇಖಗಳು ==